ಪೆನ್ಜಿಯಾಸ್, ಆರ್ನೊ
	1933.  ಜರ್ಮನಿಮೂಲದ ಅಮೆರಿಕನ್ ಭೌತವಿಜ್ಞಾನಿ.  ಮ್ಯೂನಿಕ್ ನಗರದಲ್ಲಿ ಜನನ (26-4-1933).  ಅಮೆರಿಕಕ್ಕೆ ವಲಸೆ ಬಂದು ನ್ಯೂಯಾರ್ಕ್ ನಗರ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ ಡಾಕ್ಟೊರೇಟ್ ಗಳಿಸಿ (1962) ಆ ದೇಶದಲ್ಲೇ ಉದ್ಯೋಗಸ್ಥರಾದರು.  ಸೂಕ್ಷ್ಮತರಂಗ ಭೌತವಿಜ್ಞಾನ, ಉಪಗ್ರಹ, ಸಾಮೂಹಿಕ ಸಂಪರ್ಕ, ರೇಡಿಯೊ, ಖಗೋಳವಿಜ್ಞಾನ, ಬ್ರಹ್ಮಾಂಡವಿಜ್ಞಾನ ಮತ್ತು ಮಿಲಿಮೀಟರ್ ತರಂಗ ಸಾಧನಗಳ ತಯಾರಿಕೆ-ಇವು ಪೆನ್ಜಿಯಾಸ್ ಅವರ ಆಸಕ್ತ ಕ್ಷೇತ್ರಗಳು.  ವಿಲ್ಸನ್ ಎಂಬ ಸಹೋದ್ಯೋಗಿ ಜೊತೆ ಇವರು 1965ರ ಆಸ್ಟ್ರೊಫಿಸಿಕಲ್ ಮ್ಯಾಗಜೀನಿನಲ್ಲಿ ಪ್ರಕಟಿಸಿದ ಪ್ರೌಢಪ್ರಬಂಧ ಇವರಿಗೆ 1978ರ ಸಾಲಿನ ಭೌತ ವಿಜ್ಞಾನದ ನೊಬೆಲ್ ಪಾರಿತೋಷಕವನ್ನು ತಂದುಕೊಟ್ಟಿತು.

	ಆಕಾಶಗಂಗೆಯ ಉನ್ನತ ಅಕ್ಷಾಂಶಗಳಿಂದ ಉತ್ಸರ್ಜಿತವಾಗುವ ರೇಡಿಯೊ ಅಲೆಗಳ ತೀವ್ರತೆಯನ್ನು ಅಳೆಯಲು ಪೆನ್ಜಿಯಾಸ್ ಮತ್ತು ವಿಲ್ಸನೆ ಗದ್ಯುಕ್ತರಾದರು (1964).  ಸಮಸ್ತ ಜ್ಞಾತ ಆಕರಗಳಿಂದ ಬರುವ ಅಲೆಗಳನ್ನು ನಿವಾರಿಸಿದಾಗಲೂ ಕ್ಷೀಣರವವೊಂದು ಮಾತ್ರ ಉಳಿದೇ ಇತ್ತು.  ತರಂಗಸಂಗ್ರಹಕ್ಕಾಗಿ ಉಪಯೋಗಿಸಿದ ಆಂಟೆನದ ಕೊಡುಗೆ ಇದಾಗಿರಬಹುದೆಂದು ಭಾವಿಸಿ ಅದನ್ನು ಪರೀಕ್ಷಿಸಿದಾಗ ಫಲಿತಾಂಶ ನಿಷೇಧಾತ್ಮಕವಾಗಿತ್ತು.  ಅಂದಮೇಲೆ ಆಂಟೆನಾದ ಹೊರಗಿನ ಆದರೆ ವಿಶ್ವದ ಜ್ಞಾತ ಆಕರವಲ್ಲದ ಬೇರೊಂದು ನೂತನ ಆಕರ ಈ ಶಬ್ದದ ಮೂಲವಾಗಿರಬೇಕೆಂದು ಅವರು ತರ್ಕಿಸಿದರು.  ಸಹಜವಾಗಿ ಆಂಟೆನಾವನ್ನು ವಿವಿಧ ದಿಶೆಗಳಿಗೆ ನಾಭೀಕರಿಸಿ ಶಬ್ದದ ಮೂಲವನ್ನು ಶೋಧಿಸಲು ಮುಂದಾದರು.  ಆದರೆ ಅದು ಯಾವುದೇ ಸೀಮಿತ ನೆಲೆಗೆ ಕೇಂದ್ರೀಕೃತವಾಗಿರದೆ ಎಲ್ಲೆಡೆಯಿಂದಲೂ ಬರುತ್ತಿತ್ತು.  ವಿಶ್ವದ ಹಿನ್ನೆಲೆ ನಾದವೇ ಅದಾಗಿತ್ತು.  ಅದರ ಕಾರಣವೇನು ? 15-20 ದಶಕೋಟಿ ವರ್ಷಗಳಷ್ಟು ಪ್ರಾಚೀನದಲ್ಲಿ ಮಹಾಬಾಜಣೆಯೊಂದಿಗೆ (ಬಿಗ್ ಬ್ಯಾಂಗ್) ವಿಶ್ವದ ಉದಯವಾಗಿ ಅದು ಹಿಗ್ಗುತ್ತಿದ್ದರೆ ಆರಂಭಸ್ಫೋಟದೊಂದಿಗೆ ಕಾಣಿಸಿಕೊಂಡ ವಿಕಿರಣ ಈಗ 3ಲಿ ಕೆಲ್ವಿನ್ ಉಷ್ಣತೆಯ ಕೃಷ್ಣಕಾಯದ ವಿಕಿರಣದಂತೆ ಕಾಣಬೇಕು ಎಂದು ವಿಶ್ವವಿಜ್ಞಾನಿಗಳು ತರ್ಕಿಸಿದ್ದರು.  ಇಂಥ ಹಿನ್ನೆಲೆ ವಿಕಿರಣವನ್ನು ಪತ್ತೆಹಚ್ಚಲು ಹಲವು ಪ್ರಯತ್ನಗಳು ನಡೆದಿದ್ದುವು.  ಅವು ಯಶಸ್ವಿಯಾಗಿರಲಿಲ್ಲ.  ಪೆನ್ಜಿಯಾಸ್ ಮತ್ತು ವಿಲ್ಸನ್ ನಡೆಸಿದ ಪ್ರಯೋಗಗಳು ಸಂದೇಹಾತೀತವಾಗಿ ಹಿನ್ನೆಲೆ ಗಲಭೆಯ ಅಸ್ತಿತ್ವವನ್ನು ಸ್ಥಾಪಿಸಿದುವು.  ಈ ವಿಕಿರಣದ ಅಲೆಯುದ್ಧ ಸೂಕ್ಷ್ಮತರಂಗದ ವ್ಯಾಪ್ತಿಯಲ್ಲುಂಟು.  ಹೀಗೆ ಹಿನ್ನೆಲೆ ವಿಕಿರಣದ ಆವಿಷ್ಕಾರ ಬ್ರಹ್ಮಾಂಡ ಹಿಗ್ಗುತ್ತಿದೆ ಎಂಬುದನ್ನು ದೃಢಪಡಿಸಿತು.  ವಿಶ್ವ ವಿಕಾಸದ ಹಾದಿಯಲ್ಲಿ ಧಾತುಗಳ ಉದಯವನ್ನು ಗುರುತಿಸುವುದಕ್ಕೆ ಇದು ನೆರವಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ